ಸಂಸ್ಕøತ ಭಾಷೆ

	ಇಂಡೊಯುರೋಪಿಯನ್ ಭಾಷಾಪರಿವಾರಕ್ಕೆ ಸೇರಿದ ಪ್ರಮುಖ ಭಾಷೆ. ಭಾರತೀಯ ಪ್ರಾಚೀನ ಆರ್ಯ ಭಾಷೆಗಳ ಪೈಕಿ ಒಂದು. ಗೀರ್ವಾಣ ಭಾಷೆ ಎಂದೂ ಖ್ಯಾತಿ ಪಡೆದಿದೆ. ಈ ಭಾಷೆಗೆ ಸುಮಾರು ಐದುಸಾವಿರ ವರ್ಷಗಳ ಸಮೃದ್ಧವಾದ ಇತಿಹಾಸವಿದೆ. ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ ಸಂಸ್ಕøತ, ಪ್ರಾಚೀನ ಪರ್ಷಿಯನ್, ಗ್ರೀಕ್, ಲ್ಯಾಟಿನ್, ಜರ್ಮನ್ ಮತ್ತು ಇಂಗ್ಲಿಷ್ ಮೊದಲಾದ ಭಾಷೆಗಳ ತೌಲನಿಕ ಅಧ್ಯಯನ ನಡೆಯಿತು. ಇದರ ಫಲವಾಗಿ ತೌಲನಿಕ ಭಾಷಾವಿಜ್ಞಾನಿಗಳು ಇವೆಲ್ಲವನ್ನು ಸಮಾನವಾದ ಮೂಲವೊಂದಕ್ಕೆ ಸಂಬಂಧಿಸಬಹುದೆಂದೂ ಅದನ್ನು ಪ್ರೋಟೋ ಇಂಡೊಯೂರೋಪಿಯನ್ (ಪಿ.ಐ.ಇ.) ಎಂದು ಕರೆಯಬಹುದೆಂದೂ ತಮ್ಮ ಅಧ್ಯಯನಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಪ್ರಾಚೀನರೂಪ, ಅದರ ಮೊದಲ ಸಂತತಿಗ ಳಾದ ಸಂಸ್ಕøತ ಮತ್ತು ಗ್ರೀಕನ್ನು ಬಹುಪಾಲು ಹೋಲುತ್ತಿದ್ದಿರಬಹು ದೆಂದು ಊಹಿಸಲಾಗಿದೆ. ಸಂಸ್ಕøತಭಾಷೆ ಪ್ರೋಟೋ ಇಂಡೊ ಯೂರೋಪಿಯನ್ ಭಾಷೆಯ ಅನೇಕ ಭಾಷಿಕ ಅಂಶಗಳನ್ನು ತನ್ನ ಧ್ವನಿವ್ಯವಸ್ಥೆ ಮತ್ತು ವ್ಯಾಕರಣ ವಿಚಾರದಲ್ಲಿ ಉಳಿಸಿಕೊಂಡಿದೆ.

	1. ಧ್ವನಿ ವ್ಯವಸ್ಥೆ: ಸಂಸ್ಕøತ ಧ್ವನಿವ್ಯವಸ್ಥೆ ಈ ಕೆಳಗೆ ಕಾಣಿಸಿರುವ ಧ್ವನಿಮಾಗಳನ್ನು ಒಳಗೊಂಡಿದೆ.

	ಸ್ವರಗಳು: ಕಂಠ್ಯ: ಅ, ಆ ; ತಾಲವ್ಯ: ಇ, ಈ ; ಓಷ್ಠ್ಯ: ಉ, ಊ ; ಮೂರ್ಧನ್ಯ: ಋ, ಋೂ; ದಂತ್ಯ:   ; ಕಂಠ್ಯ ತಾಲವ್ಯ: ಎ, ಐ; ಕಂಠ್ಯೌಷ್ಟ್ಯ: ಒ, ಔ.

ವ್ಯಂಜನಗಳು:

 1. ಸ್ಪರ್ಶಗಳು

ಕಂಠ್ಯ : ಕ್ ಖ್ ಗ್ ಘ್ ಙï
ತಾಲವ್ಯ: ಚ್ ಛ್ ಜ್ ಝ್ ಞï
ಮೂರ್ಧನ್ಯ: ಟ್ ಠ್ ಡ್ ಢ್ ಣ್
ದಂತ್ಯ: ತ್ ಥ್ ದ್ ಧ್ ನ್
ಓಷ್ಠ್ಯ: ಪ್ ಫ್ ಬ್ ಭ್ ಮ್

	ಇವುಗಳಲ್ಲಿ ಮೊದಲನೆಯ ಮತ್ತು ಮೂರನೆಯ ಸಾಲಿನ ಧ್ವನಿಮಾಗಳು ಅಲ್ಪಪ್ರಾಣಗಳು, ಎರಡನೆಯ ಮತ್ತು ನಾಲ್ಕನೆಯವು ಮಹಾಪ್ರಾಣಗಳು ಮತ್ತು ಐದನೆಯವು ಅನುನಾಸಿಕ. ಅಲ್ಲದೆ ಮೊದಲನೆಯ ಮತ್ತು ಎರಡನೆಯ ಸಾಲಿನ ಧ್ವನಿಮಾಗಳು ಅಘೋಷಗಳು. ಉಳಿದವೆಲ್ಲ ಘೋಷ ವ್ಯಂಜನ ಧ್ವನಿಮಾಗಳು

2. ಅರ್ಧಸ್ವರಗಳು:

ತಾಲ್ಯವ: ಯ್
ಓಷ್ಠ್ಯ: ವ್
ಮೂರ್ಧನ್ಯ: ರ್
ದಂತ್ಯ: ಲ್

3. ಊಷ್ಮಗಳು:

ಕಂಠ್ಯ: ಹ್(ಸ್ವರಯುಕ್ತ), ಹ್(ಸ್ವರರಹಿತ)
ತಾಲ್ಯವ: ಶ್ (ಸ್ವರರಹಿತ)
ಮೂರ್ಧನ್ಯ: ಷ್ (ಸ್ವರರಹಿತ)
ದಂತ್ಯ: ಸ್ (ಸ್ವರರಹಿತ)
ಶುದ್ಧ ಅನುನಾಸಿಕ: 0 (ಅನುಸ್ವಾರ)

	2. ವ್ಯಾಕರಣ ವ್ಯವಸ್ಥೆ: ಸಂಸ್ಕøತ, ಸಂಶ್ಲಿಷ್ಟ(ಇನ್‍ಫ್ಲೆಕ್ಷನಲ್) ಭಾಷೆ. ನಾಮಪದಗಳು ನಾಮವಿಶೇಷಣಗಳು, ಸರ್ವನಾಮಗಳು ಒಂದೆಡೆ, ಪೂರ್ಣ ಕ್ರಿಯಾಪದಗಳು ಮತ್ತೊಂದೆಡೆ. ವಿವಿಧ ಪ್ರತ್ಯಯಗಳ ಸೇರ್ಪಡೆಯಿಂದ ರಾಚನಿಕ ಬದಲಾವಣೆಗಳನ್ನು ಪಡೆಯುತ್ತವೆ. ಸಂಸ್ಕøತದ ಪ್ರಕೃತಿ(ಮೂಲ)ರೂಪ, ಕೆಲವು ವೇಳೆ ಒಂದೇ ಸ್ವರದಿಂದ ಕೂಡಿದ, ಕೆಲವು ವೇಳೆ ಒಂದೋ ಎರಡೋ ವ್ಯಂಜನ ಸೇರಿದ ಏಕಾಕ್ಷರ ರೂಪದಿಂದ ಕೂಡಿದುದಾಗಿವೆ. ಪ್ರಕೃತಿ ಸ್ಥಿರವಾದುದಲ್ಲ; ಸ್ವರ ವ್ಯತ್ಯಯದೊಡನೆ ವ್ಯತ್ಯಾಸವಾಗುವಂಥದು. ಆದಿಯ ಅಕ್ಷರವನ್ನು ದ್ವಿಗುಣಿಸುವುದು, ಸ್ವರಭಾರದ ಸ್ಥಾನಾಂತರ, ಸ್ವರವ್ಯತ್ಯಯಗೊಳಿಸುವುದು, ಪ್ರತ್ಯಯಗಳನ್ನು ಸೇರಿಸುವುದು ಮುಂತಾದ ಕಾರ್ಯಗಳಿಂದ ಪ್ರಕೃತಿಯ(ಮೂಲದ) ಪ್ರಾತಿಪದಿಕ ರೂಪದ ರಚನೆಯಾಗುವುದು. ಭಾಷಾತಜ್ಞರು ಪ್ರಕೃತಿಯ ಒಳಗೆ ಅಥವಾ ರಾಚನಿಕ ಅಂಶಗಳಲ್ಲಿ ಆಗುವ ಸ್ವರಪರಿವರ್ತನೆಗಳನ್ನು ಗುರುತಿಸಿದ್ದಾರೆ. ವಿಭಾಜಕ ಮತ್ತು ಅವಿಭಾಜಕ ರೂಪಗಳಾದ ಪ್ರಕೃತಿಯನ್ನೂ ಗಮನಿಸಬಹುದು. ಯ್ ವ್ ರ್ ಲ್ ಗಳು ಇ ಉ ಋ ಳ್ ಎಂಬ ವ್ಯತ್ಯಯವಾಗುವುದನ್ನು ಸಂಸ್ಕøತ ವ್ಯಾಕರಣದಲ್ಲಿ ಸಂಪ್ರಸಾರಣ ಎನ್ನುವರು. ಉದಾ: ಯಚ್>ಇಷ್ಟ, ಏಹ್>ಊಢ.

	ನಾಮಪದ ಕರ್ತೃ, ಕರ್ಮ, ಕರಣ, ಸಂಪ್ರದಾನ, ಅಪಾದಾನ, ಸಂಬಂಧ, ಅಧಿಕರಣ ಮತ್ತು ಸಂಬೋಧನ ಎಂಬ ವಿಭಕ್ತಿಗಳಿಂದ ಮತ್ತು ಏಕ, ದ್ವಿ ಮತ್ತು ಬಹುವಚನಗಳಿಂದ ಕೂಡಿದೆ. ಈ ವಿಭಕ್ತಿ ಪ್ರತ್ಯಯಗಳು ಲಿಂಗಾನುಸಾರ (ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಭೇದ ಬಹುಮಟ್ಟಿಗೆ ವ್ಯಾಕರಣಾತ್ಮಕವಾಗಿ ಪದದ ರೂಪಕ್ಕನುಸರಿಸಿ ಮತ್ತು ಅರ್ಥದಿಂದ ಸ್ವತಂತ್ರವಾಗಿದೆ) ವ್ಯತ್ಯಯ ಹೊಂದುತ್ತವೆ; ಪ್ರತ್ಯಯಗಳೂ ಪ್ರಾತಿಪದಿಕದ ಅಂತ್ಯದಲ್ಲಿರುವ ಸ್ವರ ಅಥವಾ ವ್ಯಂಜನಕ್ಕನುಸರಿಸಿ ವ್ಯತ್ಯಯವಾಗುತ್ತವೆ. ಸರ್ವನಾಮದ ವಿಭಕ್ತಿರಚನೆ ನಾಮಪದದ ವಿಭಕ್ತಿ ರಚನೆಗಿಂತ-ಪುರುಷವಾಚಕ ಸರ್ವನಾಮಗಳು ಮೂಲಭೂತವಾಗಿ ಮತ್ತು ನಿರ್ದೇಶಕ ಸರ್ವನಾಮಗಳು ಒಂದೇ ರೀತಿಯಲ್ಲಿ ಅಲ್ಲದೆಯೂ ಭಿನ್ನವಾದುದಾಗಿದೆ. ಸಂಖ್ಯಾವಾಚಕ ಪ್ರಾತಿಪದಿಕದ ರಚನೆ ದಶಮಾಂಶದ ಆಧಾರದಿಂದ ಸಿದ್ಧಗೊಂಡಿರುತ್ತದೆ.

	ಪೂರ್ಣಕ್ರಿಯಾಪದದ ರಚನೆ ಸಂಕೀರ್ಣವಾದುದು. ಇದರಲ್ಲಿ ಹತ್ತು ವರ್ಗಗಳೂ ಮೂರು ಪ್ರಯೋಗಗಳೂ(ಕರ್ತರಿ, ಕರ್ಮಣಿ ಮತ್ತು ಭಾವೇ) ಬಹುಸಂಖ್ಯೆಯ ಕಾಲಗಳೂ ಕ್ರಿಯಾರ್ಥಗಳೂ(ಮೂಡ್ಸ್) ಇವೆ. ಕ್ರಿಯಾಧಾತುವಿಗೆ ಒಂದು ಅಥವಾ ಅನೇಕ ಪೂರ್ವಪ್ರತ್ಯಯಗಳನ್ನು ಸೇರಿಸಿ ಅರ್ಥವ್ಯತ್ಯಾಸವನ್ನು ತರಬಹುದು. ಇದರಲ್ಲಿ ವರ್ತಮಾನ, ಅನಿಶ್ಚಿತ ಭೂತಕಾಲ, ಪೂರ್ಣಕಾಲ(ಪರ್ಫೆಕ್ಟ್) ಎಂಬ ಮೂರು ವ್ಯವಸ್ಥೆಗಳಿವೆ.

	ವೈದಿಕ ಸಂಸ್ಕøತದಲ್ಲಿ, ವರ್ತಮಾನ ನಿರಂತರ ಕ್ರಿಯೆಯನ್ನು ಅನಿಶ್ಚಿತ ಭೂತಕಾಲ, ಪೂರ್ಣಕ್ಷಣಿಕ ಕ್ರಿಯೆಯನ್ನು, ಪೂರ್ಣಕಾಲ ಮತ್ತು ಭೂತಕಾಲ ಕ್ರಿಯೆಯ ಫಲಿತಾಂಶ ಸ್ಥಿತಿಯನ್ನು ಸೂಚಿಸುವ ಪರಿಪಾಠವಿತ್ತು. ಆದರೆ ಆ ಬಗೆಯ ವೈಶಿಷ್ಟ್ಯಗಳು ಅಭಿಜಾತ ಸಂಸ್ಕøತದಲ್ಲಿ ಕಾಣೆಯಾಯ್ತು. ಸೂಚಕ(ಇಂಡಿಕೇಟಿವ್) ವಸ್ತುಸ್ಥಿತಿಯನ್ನು ತಿಳಿಸುವುದು; ಇಂಗಿತ ಮತ್ತು ಸಂಭಾವನಾರ್ಥಕ (ಇನ್‍ಜಂಕ್ಟಿವ್ ಮತ್ತು ಸಬ್‍ಜಂಕ್ಟಿವ್) ಅಭಿಮತ ಹಾಗೂ ಭವಿಷ್ಯವನ್ನು ತಿಳಿಸುವುದು; ಆಶಯಸೂಚಕ (ಆಪ್ಟೇಟಿವ್) ಆಶಯವನ್ನು ತಿಳಿಸುವುದು; ವಿಧ್ಯರ್ಥಕ, ಅಪ್ಪಣೆಯನ್ನು ಸೂಚಿಸುವುದು. ಪ್ರತಿಕಾಲಕ್ಕೂ ಮೂರುಬಗೆಯ ವಚನ ವ್ಯವಸ್ಥೆ ಮತ್ತು ಉತ್ತಮ, ಮಧ್ಯಮ ಮತ್ತು ಪ್ರಥಮ ಎಂಬ ಮೂರು ಬಗೆಯ ಪುರುಷ ವ್ಯವಸ್ಥೆ ಇವೆ. ಪ್ರತಿ ಕಾಲಗಳನ್ನು ಪರಸ್ಮೈಪದ ಮತ್ತು ಆತ್ಮನೇಪದ ಎಂಬ ಎರಡು ಪ್ರತ್ಯೇಕ ಪ್ರತ್ಯಯಗಳಿಂದ ಸೇರಿಸಬಹುದು.

	ಸಂಸ್ಕøತದಲ್ಲಿ, ಕಾರ್ಯಮಾಡುವುದನ್ನು ಕೇಂದ್ರೀಕರಿಸಿ ಕರ್ತರಿ, ಕ್ರಿಯಾ ಫಲಿತಾಂಶವನ್ನು ಕೇಂದ್ರೀಕರಿಸಿ ಕರ್ಮಣಿ, ವ್ಯಕ್ತಿ ನಿರ್ದಿಷ್ಟವಲ್ಲದ ವಿಕೇಂದ್ರೀಕೃತವಾದ ಭಾವೇ ಎಂಬ ಮೂರು ಪ್ರಯೋಗರೂಪಗಳಿವೆ.

	ಮೊದಲನೆಯದಕ್ಕೆ ಪರಸ್ಮೈಪದ ಪ್ರತ್ಯಯಗಳೂ ಉಳಿದುವಕ್ಕೆ ಆತ್ಮನೇಪದ ಪ್ರತ್ಯಯಗಳೂ ಸೇರುತ್ತವೆ. ಒಂದು ಕ್ರಿಯಾಪದ ಸಕರ್ಮಕವೇ ಅಕರ್ಮಕವೇ ಎಂಬ ವಿಚಾರವನ್ನು ವೈಯಾಕರಣಿ ಪಾಣಿನಿ ಚರ್ಚಿಸಿಲ್ಲ. ಆ ವಿಚಾರವನ್ನು ಪ್ರಯೋಗದಿಂದ ಹಾಗೂ ಅರ್ಥದಿಂದ ಅರಿಯಬಹುದು.

	ವರ್ತಮಾನದಲ್ಲಿ ಹತ್ತು ರೂಪಗಳಿವೆ. 1. ಕಾಂಡ ಬರೇ ಧಾತುರೂಪ (ಅಸ್ತಿ); 2. ಧಾತು ದ್ವಿರುಕ್ತಿಯಿಂದ ಕೂಡಿದುದು(ದದಾತಿ); 3. ನಾ ವನ್ನು ಧಾತುವಿಗೆ ಹಚ್ಚುವುದು (ಕ್ರಿಣಾತಿ); 4. ನ ವನ್ನು ಮಧ್ಯಪ್ರತ್ಯಯವಾಗಿಸುವುದು(ಇನ್‍ಫಿಕ್ಸ್) (ರುಣದ್ಧಿ, ರುಧ್-ಎಂಬುದರಿಂದ); 5. ಧಾತುವಿಗೆ ನು ವನ್ನು ಸೇರಿಸುವುದು (ಅಶ್ನೋತಿ, ಅಶ್-ಎಂಬುದರಿಂದ); 6 ಸರಳ ಧಾತುವಿಗೆ ಪ್ರಧಾನಸ್ವರ ಅ ವನ್ನು (ಥೀಮ್ಯಾಟಿಕ್) ಸೇರಿಸುವುದು (ತದ್‍ಅತಿ); 7. ಪ್ರಧಾನಸ್ವರ ಅ ವನ್ನು ಗುಣರೂಪದ ಧಾತುವಿಗೆ ಸೇರಿಸುವುದು(ಭವತಿ. ಭೂ- ಎಂಬುದರಿಂದ); 8. ಧಾತುವಿಗೆ ಯ ವನ್ನು ಸೇರಿಸುವುದು (ನೃತ್ಯತಿ); 9. ಅಯ ವನ್ನು ಧಾತುವಿಗೆ ಸೇರಿಸುವುದು (ಚೋರಯತಿ); ಮತ್ತು 10. ಉ ವನ್ನು ಧಾತುವಿಗೆ ಸೇರಿಸುವುದು (ತನೋತಿ, ತನುತೇ) ಭವಿಷ್ಯತ್ ರಚನೆಯು ಪ್ರತಿಪಾದಿಕಕ್ಕೆ ಸ್ಯ ವನ್ನು ಸೇರಿಸುವುದರಿಂದ ಸಿದ್ಧಿಸುತ್ತದೆ.
	ಸಂಧಿಯ ನಿಯಮಗಳು ಪದದ ಅಂಶಗಳೊಳಗೆ ಆಂತರಿಕವಾಗಿಯೂ ಬಾಹ್ಯವಾಗಿ, ಪೂರ್ವಪದದ ಅಂತ್ಯಾಕ್ಷರ ಮತ್ತು ಪರ ಪದದ ಆದ್ಯಕ್ಷರದ ನಡುವೆ ನಡೆಯುತ್ತದೆ. ಸಂಧಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕು ರ್ ಮತ್ತು ಷ್ ಧ್ವನಿಗಳ ಅನಂತರದಲ್ಲಿ ಮೂರ್ಧನ್ಯೀಕರಣವಾ ದಾಗ (ನ್>ಣ್, ತ್>ಟ್, ಸ್>ಷ್) ಆ ಅಕ್ಷರಗಳ ತರುವಾಯದಲ್ಲಿ ಬರುವ ಅಕ್ಷರಗಳಷ್ಟೇ ಅಲ್ಲದೆ ಒಂದೋ ಎರಡೋ ತಟಸ್ಥ ಅಕ್ಷರಗಳ ಅನಂತರವೂ ಅದರ ಪ್ರಭಾವವನ್ನು ಗುರುತಿಸಬಹುದು. ಬಹಿಃಸಂಧಿ ಐಚ್ಛಿಕವಾದರೆ ಅಂತಃಸಂಧಿ ಕಡ್ಡಾಯ.

	3. ವಾಕ್ಯವ್ಯವಸ್ಥೆ: ನಾಮಪದ ಮತ್ತು ಅದರ ವಿಶೇಷಣಗಳ ನಡುವೆ ಲಿಂಗ ವಚನ ವಿಭಕ್ತಿಗಳ ವಾಕ್ಯಾತ್ಮಕ ಐಕ್ಯವಿರುತ್ತದೆ. ಆದುದರಿಂದ ವಿಶೇಷಣ ನಾಮಪದದಂತೆಯೇ ಕಾಣಿಸಿಕೊಳ್ಳುತ್ತದೆ ಕರ್ತೃ ವಿಭಕ್ತಿಯಲ್ಲಿರುವ ನಾಮಪದ ಮತ್ತು ಪೂರ್ಣಕ್ರಿಯಾಪದಗಳ ನಡುವೆ ವಚನ ಮತ್ತು ಪುರುಷಗಳ ಐಕ್ಯವಿರಬೇಕಾದುದು ವ್ಯಾಕರಣನಿಯಮ. ಕಾರಣ ಕ್ರಿಯಾಪದ ದಲ್ಲಿ ಕಾರ್ಯಕ್ಕೆ ಸಂಬಂಧಿಸಿದ ವಾಕ್ಯಾತ್ಮಕ ಅಂಶಗಳನ್ನು ವಿಭಕ್ತಿ ಪ್ರತ್ಯಯಗಳೇ ಸೂಚಿಸುವುದರಿಂದ ಪದಗಳ ಅನುಕ್ರಮಣಿಕೆ, ವಾಕ್ಯದ ಅರ್ಥಕ್ಕೇನೂ ಭಂಗ ತರುವುದಿಲ್ಲ. ಗುರಿ ಅಥವಾ ಫಲವನ್ನು ತಿಳಿಸುವುದು ಕರ್ಮ, ಪ್ರಮುಖ ಕಾರ್ಯಸಾಧನವನ್ನು ಸೂಚಿಸುವುದು ಕರಣ, ಆಖ್ಯೆ ಇಲ್ಲವೆ ಕರ್ತೃವನ್ನು ಕರ್ಮಣೀ ಪ್ರಯೋಗದಲ್ಲಿ ಸೂಚಿಸುವುದು ಕರ್ತೃ, ಕಾರ್ಯಜರುಗುವ ಸ್ಥಳವನ್ನು ಸೂಚಿಸುವುದು ಅಧಿಕರಣ; ಯಾವ ಸ್ಥಳದಿಂದ ಕಾರ್ಯ ನಡೆಯುತ್ತದೆಯೋ ಅದು ಅಪಾದಾನ, ಷಷ್ಟಿ ಎರಡು ನಾಮಪದಗಳ ನಡುವಣ ಸಂಬಂಧವನ್ನು ಸೂಚಿಸುವ ಸ್ವಾಧೀನ ವಿಭಕ್ತಿಯಾಗಿದೆ. 

	ತತ್ಪುರುಷ (ವಿಶೇಷವಾದ ಉಪವಿಭಾಗ ಕರ್ಮಧಾರಯ ಸೇರಿದಂತೆ) ಬಹುವ್ರೀಹಿ, ದ್ವಂದ್ವ ಮತ್ತು ಅವ್ಯಯೀಭಾವ ಎಂಬ ನಾಲ್ಕು ಸಮಾಸ ವರ್ಗಗಳಿವೆ. ಈ ಪೈಕಿ ತತ್ಪುರುಷ ಮತ್ತು ಬಹುವ್ರೀಹಿ ಇಂಡೊ ಯೂರೋಪಿಯನ್‍ನಿಂದ ಬಂದವಾದರೆ, ದ್ವಂದ್ವ ಮತ್ತು ಅವ್ಯಯೀಭಾವ ಭಾರತೀಯ ಬೆಳೆವಣಿಗೆಯ ಹಿನ್ನೆಲೆಯವು. ಪೂರ್ವ ಪದಾಂತ್ಯದ ವಿಭಕ್ತಿಪ್ರತ್ಯಯಗಳು ಲೋಪವಾಗಿ, ಎರಡು ಪದಗಳನ್ನು ಒಂದೇ ಸ್ವರಭಾರದ ಕೆಳಗೆ ಐಕ್ಯಗೊಳಿಸಿ, ಇಡೀ ಸಮಾಸಕ್ಕೆ ವಿಶೇಷಾರ್ಥವನ್ನು ಉಂಟುಮಾಡುವುದೇ ಈ ಸಮಾಸಗಳ ಸಾಮಾನ್ಯ ಲಕ್ಷಣ.

	ಚಾರಿತ್ರಿಕ ಬೆಳೆವಣಿಗೆ: ಸಂಸ್ಕøತದ ಚಾರಿತ್ರಿಕ ಬೆಳೆವಣಿಗೆಯನ್ನು ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಇಂಡೊಯೂರೋಪಿಯನ್ (ಇಂಡೊಆರ್ಯನ್) ಎಂಬ ಮೂರು ಅವಸ್ಥೆಗಳಲ್ಲಿ ಗುರುತಿಸಬಹುದು.

	1. ಪ್ರಾಚೀನಕಾಲ(ಕ್ರಿ.ಪೂ. 2000ದಿಂದ): ಒಂದು ಸಾವಿರ ಶ್ಲೋಕಗಳ ಸಂಗ್ರಹವಾದ ಋಗ್ವೇದವೇ ಅತ್ಯಂತ ಪ್ರಾಚೀನವಾದ ವೈದಿಕ ಸಾಹಿತ್ಯಭಾಗ. ಅಭಿಜಾತದ ಭಾಷೆ ವೈದಿಕ ಪಾಠಕ್ಕಿಂತ ಭಿನ್ನವಾದ ಅನಂತರದ ರೂಪ. ಪಾಣಿನಿಯ ಕ್ರಮಕ್ಕೆ ಅಳವಟ್ಟು ಕಂಡುಬರುವ ಸಂಸ್ಕøತದ ವಿಕಾಸದ ಪರಿ: (i)ಎರಡೇ ಪದಗಳು ಸೇರಿ ವಿಶೇಷಾರ್ಥದೊಡನೆ ಕೂಡಿದ ಸಮಾಸಗಳು ವೈದಿಕ ಸಂಸ್ಕøತದಲ್ಲಿ ಕಾಣಿಸಿಕೊಳ್ಳತ್ತವೆ. ಅನಂತರದ ಅಭಿಜಾತ ಸಂಸ್ಕøತ ದೀರ್ಘವಾದ ಅನೇಕ ಪದಗಳಿಂದ ಕೂಡಿದ, ಯಾವ ಬಗೆಯ ವಿಶಿಷ್ಟತೆಯನ್ನೂ ತೋರದ, ಕೆಲವು ವೇಳೆ ಪಾಣಿನಿಯ ನಿಯಮವನ್ನು ಮೀರಿರುವ ಸಮಾಸಗಳನ್ನು ಒಳಗೊಂಡಿದೆ. ಉದಾ: ಜಗತ್‍ಸ್ರಷ್ಟಾ. (ii) ಕ್ರಿಯಾಪದದ ರಚನೆಯನ್ನು ಅನಂತರದ ಅಭಿಜಾತ ಸಂಸ್ಕøತದಲ್ಲಿ ಸರಳಗೊಳಿಸಲಾಗಿದೆ. ಸಂಭಾವನಾ ರೀತಿ ಕಾಣಿಸಿಕೊಳ್ಳುವುದಿಲ್ಲ. (iii)ಕೃದಂತಗಳ ಬಳಕೆ ಹೆಚ್ಚಾಯಿತು. ಪೂರ್ಣ ಕ್ರಿಯಾಪದಗಳು ಸ್ಥಳಾಂತರಗೊಂಡವು. (iv) ಸ್ವರಭಾರಲೋಪ, ಸ್ವರಭಾರವನ್ನು ಅವಲಂಬಿಸಿದ ಅರ್ಥಭೇದಗಳನ್ನು ವ್ಯಾಕರಣಗ್ರಂಥಗಳಲ್ಲಿ ಉಲ್ಲೇಖಿಸಲಾಗುತ್ತಿದೆ. ಆದರೆ ಬರೆಹಗಾರರು ಅದಕ್ಕೆ ಗಮನ ಹರಿಸುತ್ತಿಲ್ಲ. (v) ಭೂತಕಾಲ ಸೂಚನೆಗೆ ಅಪರಿಪೂರ್ಣ(ಇಂಪರ್‍ಫೆಕ್ಟ್), ಪರಿಪೂರ್ಣ(ಪರ್ಫೆಕ್ಟ್) ಮತ್ತು ಅನಿರ್ದಿಷ್ಟ ಭೂತಕಾಲ ರೂಪಗಳನ್ನು ಯಾವುದೇ ತಡೆಯಿಲ್ಲದೆ ಬಳಸಲಾಗಿದೆ (vi) ನವ್ಯ ನ್ಯಾಯಪದ್ಧತಿಯ ಅಂತಿಮದಲ್ಲಿ ಕ್ರಿಯಾಪದದ ಬಳಕೆಯನ್ನು ಬಹುಮಟ್ಟಿಗೆ ಕೈಬಿಡಲಾಯಿತು.    

	2. ಮಧ್ಯಕಾಲೀನ (ಕ್ರಿ.ಪೂ. 500 ರಿಂದ ಕ್ರಿ.ಶ. 1000): ಪಾಲಿ ಮತ್ತು ಪ್ರಾಕೃತಭಾಷೆಗಳು ಪ್ರಚಲಿತವಾದವು. ಸಂಸ್ಕøತದ ಕೆಲವು ಸ್ವರಗಳನ್ನು ಲೋಪಗೊಳಿಸುವುದು, ವಿಜಾತೀಯಾಕ್ಷರಗಳನ್ನು ಸಜಾತೀಯವಾಗಿಸುವುದು, ಪಾಲಿ ಮತ್ತು ಪ್ರಾಕೃತಗಳೆರಡಕ್ಕೂ ಇರುವ ಪ್ರಮುಖ ಲಕ್ಷಣ. ಪ್ರಾಕೃತಗಳು ವೈದಿಕ ಭಾಷೆಯ ಸಹಜವಾದ ಮತ್ತು ಪ್ರಾದೇಶಿಕವಾದ ಬೆಳೆವಣಿಗೆಗಳಾಗಿ, ಅಭಿಜಾತ ಸಂಸ್ಕøತದೊಡನೆ ಸಹಬಾಳ್ವೆ ನಡೆಸಿದವು. ಮಹಾರಾಷ್ಟ್ರೀ (ದಕ್ಷಿಣ), ಶೌರಸೇನಿ(ಮಧ್ಯ), ಮಾಗಧೀ(ಪೂರ್ವ), ಪೈಶಾಚೀ(ಉತ್ತರ)-ಇವು ಕ್ಲಾಸಿಕಲ್ ಪ್ರಾಕೃತ ಭಾಷಾರೂಪಗಳು. ಅರ್ಧಮಾಗಧಿ ಪ್ರಾಕೃತ ಎಂಬುದು ಮತ್ತೊಂದು ಪ್ರಮುಖ ರೂಪ. ಇದು ಮಾಗಧಿ ಮತ್ತು ಶೌರಸೇನಿ ಇವೆರಡರ ಲಕ್ಷಣಗಳನ್ನೂ ಒಳಗೊಂಡಿದೆ. ಸಂಸ್ಕøತ ನಾಟಕಗಳಲ್ಲಿ ಸ್ತ್ರೀಯರೂ ಸಾಮಾಜಿಕವಾಗಿ ಕೆಳವರ್ಗಕ್ಕೆ ಸೇರಿದ ವ್ಯಕ್ತಿಗಳೂ ಆಡುವ ಮಾತುಗಳಲ್ಲಿ ಪ್ರಾಕೃತವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸೇತುಬಂಧನ, ಗಾಥಾಸಪ್ತಶತಿ ಎಂಬ ಕೃತಿಗಳು ಮಹಾರಾಷ್ಟ್ರೀ ಪ್ರಾಕೃತದಲ್ಲಿ ರಚನೆಗೊಂಡಿವೆ. ಮಹಾರಾಷ್ಟ್ರೀಯಲ್ಲಿ ಸಾಹಿತ್ಯಸೃಷ್ಟಿ ವಿಪುಲವಾಗಿದೆ. ಕರ್ಪೂರ ಮಂಜರೀ ಎಂಬ ಕೃತಿಯ ಗದ್ಯ ಸಂಪೂರ್ಣವಾಗಿ ಶೌರಸೇನಿ ಪ್ರಾಕೃತದಲ್ಲಿದೆ. ಅರ್ಧಮಾಗಧಿಯಲ್ಲಿ ಜೈನರ ಪವಿತ್ರ ಧರ್ಮಗ್ರಂಥಗಳು ರಚಿತವಾಗಿವೆ.

	3. ಆಧುನಿಕ ಕಾಲ (1000 ದಿಂದ): ಪ್ರತಿಯೊಂದು ಗ್ರಾಂಥಿಕ ಪ್ರಾಕೃತವೂ ಅಪಭ್ರಂಶವೆಂಬ ಆಡುಮಾತಿನ ರೂಪಗಳ ಉಗಮಕ್ಕೆ ಕಾರಣವಾಯಿತು. ಉತ್ತರ ಭಾರತದಲ್ಲಿ ಬಳಕೆಯಲ್ಲಿರುವ ದೇಶಭಾಷಾ ರೂಪಗಳು ಸರಳವಾಗಿ ಆಧುನಿಕ ಇಂಡೊಆರ್ಯನ್ ಭಾಷಾವರ್ಗಕ್ಕೆ ಸೇರಿದವು. ಇವೆಲ್ಲ ಅಪಭ್ರಂಶದಿಂದ ಜನಿಸಿದವು. ಮರಾಠಿ ಭಾಷೆ, ಮಹಾರಾಷ್ಟ್ರೀ ಅಪಭ್ರಂಶದಿಂದ ಉಗಮಗೊಂಡು ವಿಕಾಸ ಪಡೆದಿದೆ.

	ಸಂಸ್ಕøತದ ಪಾಣಿನಿ ವ್ಯಾಕರಣ ಪ್ರಪಂಚ ಪ್ರಸಿದ್ಧಿ ಗಳಿಸಿದೆ. ಸೂತ್ರಶೈಲಿಯ ಅನ್ವೇಷಣೆ, ಭಾಷೆಯ ಅಂತ್ಯಾವಯವ ವಾಕ್ಯವೇ ಹೊರತು ಶಬ್ದವಲ್ಲವೆಂಬ ಸಿದ್ಧಾಂತ, ಶಬ್ದಗಳನ್ನು ಸುಬನ್ತ, ತಿಙನ್ತ, ಅವ್ಯಯಗಳೆಂದು ವಿಭಾಗಿಸಿರುವ ಕ್ರಮ, ಸ್ಥಾನ-ಪ್ರಯತ್ನ ವಿವೇಕ, ಲೌಕಿಕ ಮತ್ತು ಸಂಸ್ಕøತ ಪದಗಳ ತೌಲನಿಕ ಅಧ್ಯಯನ - ಇವು ಪಾಣಿನಿ ವ್ಯಾಕರಣದ ಕೆಲವು ವೈಶಿಷ್ಟ್ಯಗಳು. ಇವುಗಳಿಂದ ಇಂದಿನ ಭಾಷಾವಿಜ್ಞಾನಕ್ಕೂ ಸ್ಫೂರ್ತಿ ಸಿಕ್ಕಿದೆ. ಪಾಣಿನಿ ಮತ್ತು ಅವನ ವಿಚಾರಗಳನ್ನು ಒಪ್ಪಿದ, ಅನುಮೋದಿಸಿದ ವಿದ್ವಾಂಸರು ಶುದ್ಧವಾದ ಸಂಸ್ಕøತಭಾಷೆ ಹೇಗಿರಬೇಕೆಂದು ನಿಯಮಗಳನ್ನು ಮಂಡಿಸಿದ್ದರೂ ಮುಂದಿನ ತಲೆಮಾರಿನ ತಜ್ಞರ ವ್ಯಾಕರಣ ಚಟುವಟಿಕೆಗಳು ಪಾಣಿನಿಯ ಮಾರ್ಗವನ್ನು ಅತಿಕ್ರಮಿಸುವ ಹಾಗೂ ಅವನ ನಿಯಮಗಳನ್ನು ಅನ್ಯ ರೀತಿಯಲ್ಲಿ ವ್ಯಾಖ್ಯಾನಿಸುವ ರೀತಿಗಳಲ್ಲೇ ತೊಡಗಿದುವು. ಸಂಸ್ಕøತ ಬರೆಹ ದೇವನಾಗರಿ ಲಿಪಿಯಲ್ಲಿದೆ.	 
             
              (ಆರ್.ಎಮ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ